ಬೋನ್ಸೈ

	ಬೋನ್ಸೈ ಎಂಬುದು ಜಪಾನೀ ಪದ. ಕನ್ನಡದಲ್ಲಿ ಇದಕ್ಕೆ ಸಮನಾರ್ಥವಾದ ಪದವಿಲ್ಲ. ಕಾರಣ ಇದೊಂದು ಚೀನೀ ಹಾಗೂ ಜಪಾನೀ ಕಲೆ. ಕನ್ನಡದಲ್ಲಿ ಇದನ್ನು ಹೀಗೆ ವಿವರಿಸಬಹುದು: ಆಳವಿಲ್ಲದ ಕುಂಡಗಳಲ್ಲಿ ಬೆಳೆಸಿದ ಕುಬ್ಜ ಮರಗಳು. ಈ ಕಲೆಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಹೀಗಾಗಿ ಇಂದು ಜಪಾನಿನಲ್ಲಿ ಸಾವಿರ ವರ್ಷ ವಯಸ್ಸಿನ ಈ ರೀತಿಯ ಸುಂದರ ಕುಬ್ಜ ಮರಗಳನ್ನು ನೋಡಬಹುದು. ಒಂದು ಸಾವಿರ ವರ್ಷಗಳ ಹಿಂದೆ ಚೀನೀ ಶ್ರೀಮಂತರು ತಮ್ಮ ಗೃಹಗಳನ್ನು ಅಲಂಕರಿಸುವ ಏಕೋದ್ದೇಶದಿಂದ ಕುಬ್ಜ ಮರಗಳನ್ನು ಬೆಳೆಸುವ ಕಲೆಯನ್ನು ಆರಂಭಿಸಿ ಕರಗತ ಮಾಡಿಕೊಂಡರು. ತತ್ಸಮಯದಲ್ಲೇ ಜಪಾನೀಯರೂ ಈ ಕಲೆಯನ್ನು ಪ್ರಾರಂಭಿಸಿದರು. ಕಾಲಾಂತರದಲ್ಲಿ ಚೀನೀಯರ ಕ್ರಾಂತಿ ಅಲ್ಲಿ ಈ ಕಲೆಯನ್ನು ಭೂಗತಗೊಳಿಸಿತು. ಆದರೆ ಜಪಾನೀಯರು ಕೈಬಿಡದೆ ಮುಂದರೆಸಿಕೊಂಡು ಇಂದು ಈ ಕಲೆಯನ್ನು ಪ್ರಪಂಚದಾದ್ಯಂತ ಜನಪ್ರಿಯಗೊಳಿಸಿದರು. ಹೀಗಾಗಿ ಇಂದು ಜಪಾನಿನಲ್ಲಿ ನೂರಾರು ವರ್ಷಗಳ ಬೋನ್ಸೈ ನೋಡಲು ಲಭ್ಯ.

	ಆದರೆ ಹಾಸ್ಯ ಸಂಗತಿ ಎಂದರೆ ಈ ಕಲೆಯ ಉಗಮ ಭಾರತ. ಐದು ಸಾವಿರ ವರ್ಷಗಳ ಇತಿಹಾಸವಿರುವ ಭಾರತ ಋಷಿ ಮುನಿಗಳ ದೇಶ. ಅಗ್ನಿಯೇ ಪ್ರಧಾನ ದೇವತೆಯಾಗಿದ್ದ ಭಾರತೀಯ ಸಂಪ್ರದಾಯದಲ್ಲಿ ಋಷಿ ಮುನಿಗಳು ತಮ್ಮ ದಿನಚರಿಯನ್ನು ಅಗ್ನಿಗೆ ಸಮಿತ್ತುಗಳನ್ನು ಪಾಲಾಶ, ಅಶ್ವತ್ಥ, ಶಮಿ, ಔದುಂಬರ ಮುಂತಾದ ಮರಗಳ ಕಾಂಡಗಳು ಅರ್ಪಿಸುವುದರ ಮೂಲಕ ಆರಂಭಿಸುತ್ತಿದ್ದರು. ಅರಣ್ಯವಾಸಿಗಳಾಗಿದ್ದು ಋಷಿಮುನಿಗಳ ಅಲೆಮಾರಿಗಳಾಗಿದ್ದರು. ಆಮಂತ್ರಿಸಿದ ರಾಜ್ಯಗಳಿಗೆ ತೆರಳಿ ರಾಜಾಥಿತ್ಯಗಳನ್ನು ಸ್ವೀಕರಿಸಿ ಅಲ್ಲಿನ ಹಿತಕ್ಕಾಗಿ ಯಾಗ ಯಙ್ಞಗಳನ್ನು ನೆರವೇರಿಸುತ್ತಿದ್ದರು. ಊರಿಂದೂರಿಗೆ ಅಲೆದಾಡುವ ಸಮಯದಲ್ಲಿ ಮಾರ್ಗಮಧ್ಯದಲ್ಲಿ ಸಮಿತ್ತುಗಳ ದುರ್ಲಭತೆಯಿಂದಾಗಿ ಅಗತ್ಯವಾದ ಮರಗಳನ್ನು ಪುಟ್ಟ ಮರದ ಪೆಟ್ಟಿಗೆಗಳಲ್ಲಿ ಬೆಳೆಸಿ ಕುಬ್ಜವಾಗಿ ಬೆಳೆಯುತ್ತಿದ್ದವು- ಶಿಷವೃಂದ ಜತೆಯಲ್ಲಿ ಕೊಂಡೊಯ್ಯುತ್ತಿದ್ದರು. ಹೀಗಾಗಿ ಅವರ ದಿನನಿತ್ಯದ ಸಮಿತ್ತುಗಳ ಪೂರೈಕೆಯಾಗುತ್ತಿತ್ತು. ಆಗ ಅವಕ್ಕೆ ಬೋನ್ಸೈ ಹೆಸರಿರಲಿಲ್ಲ.

	ತಲೆಮಾರಿನಿಂದ ತಲೆಮಾರಿಗೆ ಹಸ್ತಗತವಾಗುತ್ತಿದ್ದ ಈ ಪುಟ್ಟಮರಗಳನ್ನು ಆಸಕ್ತಿ ಹಾಗೂ ಕುಶಲತೆಗಳಿಂದ ಸಾಕಿ ಬೆಳೆಸುವುದನ್ನು ಕಲಿತರು. ಕಾರಣಾಂತರಗಳಿಂದ ಕುಬ್ಜವಾಗಿ ಕಾಡುಗಳಲ್ಲಿ (ಪ್ರಕೃತಿಯಲ್ಲಿ) ಬೆಳೆಯುತ್ತಿದ್ದಂತಹ ಮರಗಳನ್ನು ಕಿತ್ತು ತಂದು ಆಳವಿಲ್ಲದ ಕುಂಡಗಳಲ್ಲಿ ಬೆಳೆಸಿ ಸಾಕುವ ಕಲೆಯನ್ನು ಹಸ್ತಗತ ಮಾಡಿಕೊಂಡರು. ಇಂದು ಈ ಕಲೆ ಕೇವಲ ಕಿತ್ತು ತಂದು ನೆಟ್ಟು ಬೆಳಸುವ ಹಂತದಲ್ಲಿಲ್ಲ. ವೈಜ್ಞಾನಿಕವಾಗಿ ಕುಬ್ಜತ್ವವನ್ನು ನೀಡಿ ಸುಂದರಾಕಾರಗಳಲ್ಲಿ ಬೆಳೆಸುವ ಕಲೆಯಾಗಿ ಬೆಳೆದಿದೆ.

	ತಾಯಿ ಬೇರಿರುವ ಮರಗಳ ತಾಯಿ ಬೇರನ್ನು ತುಂಡರಿಸಿದರೆ (ಹಾಗೂ ಮತ್ತು ಹಲವಾರು ಕಾರಣಗಳಿಂದ) ಮರ ಕಬ್ಜವಾಗಿ ಬೆಳೆಯುತ್ತದೆ. ಹೀಗಾಗಿ ನಾರು ಬೇರುಗಳಿಂದ ಕೂಡಿರುವ ತೆಂಗಿನ ಜಾತಿಯ ಮರಗಳು ತಾಳೆ ಜಾತಿಯ ಮರಗಳನ್ನು ಹೊರತು ಪಡಿಸಿ ಉಷ್ಣವಲಯದಲ್ಲಿ ಬೆಳೆಯುವ ಎರಡು ಸಾವಿರಕ್ಕೂ ಹೆಚ್ಚಿನ ಜಾತಿಯ ಮರಗಳನ್ನು ಬೋನ್ಸೈ ಆಗಿ ಬೆಳೆಸಬಹುದು.

	ಅಂದು ಕೇವಲ ಗೃಹಾಲಂಕಾರಕ್ಕಾಗಿ ಸೀಮಿತವಾಗಿದ್ದ ಬೋನ್ಸೈಗೆ ಇಂದಿನ ಶತಮಾನದಲ್ಲಿ ಅತ್ಯಂತ ಮಹತ್ವಪೂರ್ಣ ಸ್ಥಾನವಿದೆ. ಪ್ರಪಂಚದಾದ್ಯಂತ ಅರಣ್ಯಗಳ ನಾಶ ಇತಿಮಿತಿಯಿಲ್ಲದೆ ನೆರವೇರುತ್ತಿದೆ. ಬೋನ್ಸೈಗಳನ್ನು ಒಂದು ವಿಧದಲ್ಲಿ ರಕ್ತ ಬ್ಯಾಂಕ್, ಬಿಡಿ ಅಂಗಗಳ ಬ್ಯಾಂಕುಗಳಂತೆ-ಮರಗಳ ಬ್ಯಾಂಕ್ ಎಂದು ಪರಿಗಣಿಸಬಹುದು. ಒಂದು ಎಕರೆ ಭೂಮಿಯಲ್ಲಿ ನೈಸರ್ಗಿಕವಾಗಿ ತಂತಾನೆ 60-70 ಮರಗಳು ಬೆಳೆಯಬಲ್ಲವು. ಆದರೆ ವ್ಯವಸ್ಥಿತವಾಗಿ ಒಂದೆಕರೆ ಭೂಮಿಯಲ್ಲಿ 25000-30000 ಬೋನ್ಸೈಗಳನ್ನು ಶೇಖರಿಸಿ ಇಡಬಹುದು. ಇವು ಕೇವಲ ದೈಹಿಕ ಕುಬ್ಜಗಳೇ ಹೊರತು ಅನುವಂಶೀಯ ಕುಬ್ಜಗಳಲ್ಲ. ಬೋನ್ಸೈ ಬೀಜಗಳೆಂಬುದಿಲ್ಲ. ಬೋನ್ಸೈಗಳಲ್ಲಿ ಮೂಡುವ ಬೀಜಗಳಿಂದ ಮಾಮೂಲು ಮರಗಳು ಬೆಳೆಸಬಲ್ಲವೇ ವಿನಹ ಬೋನ್ಸೈಗಳಲ್ಲ. ಬೋನ್ಸೈ ಮಾನವ ಕೃತ ನೈಸರ್ಗಿಕ/ಕುಬ್ಜ ಮರ! ಕಾರಣ ತಳಿ ಸಂಕರಣೆಯಲ್ಲಿ ಮಾಡುವಂತೆ ಇವುಗಳ ಜೀನುಗಳನ್ನು ಮಾರ್ಪಡಿಸಿಲ್ಲ. ಭೌತಿಕ ಕಾರಣಗಳಿಂದ ಕುಬ್ಜವಾಗಿ ಬೆಳೆಯುವ ಬೋನ್ಸೈಗಳನ್ನು ಕುಂಡಗಳಿಂದ ಕಿತ್ತು ನೆಲದಲ್ಲಿ ನೆಟ್ಟದ್ದೇ ಆದರೆ ಐದಾರು ವರ್ಷಗಳಲ್ಲಿ ಅದ್ಭುತವಾದ ಮರಗಳು ಬೆಳೆದು ನಿಲ್ಲುತ್ತವೆ. ಹೀಗಾಗಿ ದಿಢೀರ್ ಅರಣ್ಯವನ್ನು ಸೃಷ್ಟಿಸಬಹುದು.

	ಇಂದು ಪ್ರಪಂಚದಾದ್ಯಂತ ಅನೇಕ ಪಾರ್ಕುಗಳಲ್ಲಿ ಬೋನ್ಸೈಗಳಿಗಾಗಿ ಒಂದಿಷ್ಟು ಸ್ಥಳವನ್ನು ಮೀಸಲಾಗಿಟ್ಟಿರುತ್ತಾರೆಯೇ ಹೊರತು ಬೋನ್ಸೈ ಪಾರ್ಕೆಂಬ ಕಲ್ಪನೆ ಜಪಾನಿನಲ್ಲೂ ಇಲ್ಲ. ಆದರೆ ಕರ್ನಾಟಕದ ಬೆಂಗಳೂರಿನ ಲಾಲ್‍ಬಾಗಿನಲ್ಲಿ ಎಚ್.ಎಸ್. ಸೀತಾರಾಂ ರತ್ನಮ್ಮ ಬೋನ್ಸೈ ಪಾರ್ಕ್-ಬೋನ್ಸೈಗೆಂದೇ ಎರಡೂವರೆ ಎಕರೆ ಪ್ರದೇಶವನ್ನು ಮೀಸಲಾಗಿಟ್ಟು ಒಂದು ಸಾವಿರ ಬೋನ್ಸೈಗಳ ಅದ್ಭುತ ಹಾಗೂ ಸುಂದರ ಉದ್ಯಾನವನ್ನು ಸೃಷ್ಟಿಸಿದ್ದಾರೆ. ಇದು ಜಗತ್ತಿನ ಮೊಟ್ಟ ಮೊದಲ ಬೋನ್ಸೈ ಪಾರ್ಕ್. ಬೋನ್ಸೈ ಶ್ರೀನಿವಾಸ್ ಎಂದೇ ಪ್ರಖ್ಯಾತರಾದ ಶ್ರೀನಿವಾಸರು ಈ ಪಾರ್ಕಿನ ಪ್ರವರ್ತಕರು. ತಮ್ಮ ಜೀವಿತ ಕಾಲದಲ್ಲಿ ಬೆಳೆಸಿದ ಒಂದು ಸಾವಿರ ಬೋನ್ಸೈಗಳನ್ನು ದೇಣಿಗೆಯಾಗಿತ್ತು. ತಮ್ಮ ಮಾತಾಪಿತರ ಹೆಸರಿನಲ್ಲಿ ಲಾಲ್‍ಬಾಗಿನಲ್ಲಿ ಈ ಪಾರ್ಕನ್ನು ಸೃಷ್ಟಿಸಿದ್ದಾರೆ.   
									                   (ಬೋನ್ಸೈ ಶ್ರೀನಿವಾಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ